ಭಾಗವಂತಿಕೆ ಮೇಳ
ಬೆಂಗಳೂರು, ತುಮಕೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಕಾಣಬರುವ ವೈಷ್ಣವ ಧರ್ಮಪರಂಪರೆ ಹಿನ್ನೆಲೆಯಾಗುಳ್ಳ ಒಂದು ಜನಪದ ಹಾಡುಗಾರಿಕೆ. ವಿರಳವಾಗಿ ಶೈವಸಂಪ್ರದಾಯದವರೂ ಇದನ್ನು ಆಚರಿಸುವುದಿದೆ. ವಿಷ್ಣುವಿನ ವಿವಿಧ ರೂಪಗಳನ್ನು ಭಕ್ತರು ನಿರ್ದಿಷ್ಟ ಸಮಯದಲ್ಲಿ ಹಾಡಿ ಹೊಗಳಿ ಆಚರಿಸುವ ಉತ್ಸವ ಈ ಮೇಳ. ತಿರುಪತಿ ತಿಮ್ಮಪ್ಪ, ಮೇಲುಕೋಟೆ ಚೆಲುವರಾಯಸ್ವಾಮಿ, ಆಂಜನೇಯಸ್ವಾಮಿ, ಬೇಟೆರಾಯಸ್ವಾಮಿ, ಬೇಲೂರು ಚೆನ್ನಕೇಶವಸ್ವಾಮಿ ಗರುಡದೇವರು, ರಾಮದೇವರು, ಗೋಪಾಲಕೃಷ್ಣ, ವೆಂಕಟರಮಣಸ್ವಾಮಿ, ಮುಂತಾದ ದೈವರೂಪಗಳನ್ನು ಈ ಸಂಪ್ರದಾಯದವರು ಆರಾಧಿಸುತ್ತಾರೆ. 

	ಈ ಸಂಪ್ರದಾಯ ಆಚರಿಸುವವರು ಪ್ರತಿವರ್ಷ ದೀವಳಿಗೆ ಹತ್ತಿರ ಬಂದಾಗ ಊರಿನ ಪ್ರತಿಯೊಂದು ಮನೆಯಿಂದಲೂ ಒಬ್ಬೊಬ್ಬರಂತೆ ಒಂದು ಚಾವಡಿಯಲ್ಲಿಯೋ ಚೌಕದಲ್ಲಿಯೋ ಸೇರಿಕೊಂಡು ತಂತಮ್ಮ ದೇವರಿಗೆ ಪೂಜೆ ಸಲ್ಲಿಸಿ ಭಾಗವಂತಿಕೆ ಕಟ್ಟಿ ಊರಾಡಲು ಹೊರಡುತ್ತಾರೆ. ಈ ದಂಡು ದೇವರ ಪಟಾ, ಚೂರಿ ಪಾನುಕಹಳೆ, ನಗಾರಿ ತೆಗೆದುಕೊಂಡು ತಮ್ಮ ಹೆಣ್ಣುಮಕ್ಕಳನ್ನು ಕೊಟ್ಟ ಊರುಗಳ ಕಡೆಗೂ ಅಥವಾ ತಮ್ಮ ದೇವರ ಒಕ್ಕಲು ಇರುವ ಊರುಗಳ ಕಡೆಗೂ ದಾರಿ ಹಿಡಿಯುತ್ತದೆ. ಹೀಗೆ ಹೊರಡುವ ತಂಡವನ್ನು ದೀವಳಿಗೆ ದಂಡು, ಹಿರಿಸೇವೆ ದಂಡು ಎಂದು ಕರೆಯಲಾಗುತ್ತದೆ. 

	ಮೊದಲಿಗೆ ಪಟಾವೊಂದನ್ನು ಹೊತ್ತ ಒಬ್ಬ (ಕುಳವಾಡಿ)9 ಹೋಗಬೇಕೆಂದಿರುವ ಊರಿಗೆ ದಂಡಿಗಿಂತ ಮುಂಚೆಯೇ ಹೋಗಿ, ಆ ಊರಿನ ಗುಡಿಯ ಬಳಿ ಆ ಪಟಾವನ್ನು ನಿಲ್ಲಿಸುತ್ತಾನೆ. ಆಗ ತೌರಿನ ಪಟಾ ಬಂದಿತೆಂದು ಹೆಣ್ಣುಮಕ್ಕಳು, ಮನೆದೇವರ ಪಟಾ ಬಂದಿತೆಂದು ಇತರರು, ಉತ್ಸಾಹಗೊಂಡು, ಬರುವ ದಂಡಿಗೆ ಊಟೋಪಚಾರಗಳ ವ್ಯವಸ್ಥೆ ಮಾಡುತ್ತಾರೆ. ದಂಡು ಬಂದಮೇಲೆ ಭಾಗವಂತಿಕೆ ಕಟ್ಟಿ ದವಸಧಾನ್ಯ ಸಂಗ್ರಹಿಸಿ ದೀವಳಿಗೆಯಂದು ಸ್ವಗ್ರಾಮಕ್ಕೆ ಮರಳಿ, ಹಬ್ಬ ಆಚರಿಸಿ, ಸಂಗ್ರಹಿಸಿ ತಂದ ಧಾನ್ಯದಲ್ಲಿ ಪರ ಮಾಡುತ್ತಾರೆ. ಇದನ್ನು ಊರಾಡುವುದು ಎನ್ನುತ್ತಾರೆ. ಊರಾಡಲು ಹೋಗುವಾಗ ಬಳಸುವ ಸಾಧನ ಸಾಮಗ್ರಿಗಳು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುವುದುಂಟು. ಊರಾಡುವಾಗ ಪಟಾ ಅಥವಾ ದಾಳ ಬಳಸುವುದು ಎಲ್ಲೆಡೆ ಸಾಮಾನ್ಯ. ಇದಲ್ಲದೆ ಚೂರಿಪಾನು ಛತ್ರಿ ಕಹಳೆ ನಗಾರಿಗಳೂ ಇರುತ್ತವೆ. 

	ಪಟಾ ಅಥವಾ ದಾಳ ಎಂದರೆ ಒಂದು ಬಗೆಯ ಬಾವುಟ. ಐದರಿಂದ ಆರು ಮೀಟರ್ ಉದ್ದದ ಗಳುವಿಗೆ ಬಣ್ಣ ಬಣ್ಣದ ಬಟ್ಟೆಗಳನ್ನು ಸುತ್ತಿ ಮೇಲ್ತುದಿಯಲ್ಲಿ ಒಂದು ಪುಟ್ಟ ಆಕಾರದ ಲೋಹದ ಛತ್ರಿ ಸಿಕ್ಕಿಸುತ್ತಾರೆ. ಈ ಛತ್ರಿಯಡಿ ಸೀಳು ಬಾಯಿಯ ಬಾವುಟವೊಂದು ಕಂಡುಬರುತ್ತದೆ. ಈ ಬಾವುಟ ಇಲ್ಲದಿರುವ ಉದಾಹರಣೆಗಳೂ ಇವೆ. ಪಟಾಕ್ಕೆ ಸುತ್ತುವ ಬಟ್ಟೆಗಳ ನಡುವೆ ಅಲ್ಲಲ್ಲಿ ಆಂಜನೇಯ ಗರುಡ ರಾಮ ಲಕ್ಷ್ಮಣ ಕೃಷ್ಣ ಮುಂತಾದ ದೇವರ ಚಿತ್ರಗಳಿರುತ್ತವೆ. ರಾಮ ಮತ್ತು ಸೀತೆಯ ಚಿತ್ರಗಳು ಮಾತ್ರ ರೇಷ್ಮೆ ವಸ್ತ್ರದ ಮೇಲೂ ಗರುಡ ಹನುಮ ಲಕ್ಷ್ಮಣ ಮುಂತಾದವರ ಚಿತ್ರಗಳು ಹತ್ತಿಯ ಬಟ್ಟೆಯ ಮೇಲೂ ಚಿತ್ರಿತಗೊಂಡಿರುತ್ತವೆ. 

	ಚೂರಿಪಾನು ಕೆಲವು ಕಡೆ ವೃತ್ತಾಕಾರದಲ್ಲಿ ಕೆಲವು ಕಡೆ ಅರಳಿ ಎಲೆಯ ಆಕಾರದಲ್ಲಿ ಇರುವುದುಂಟು. ಯಾವುದಾದರೂ ಲೋಹದ ತೆಳ್ಳನೆಯ ಸರಳನ್ನು ಆ ಆಕಾರಕ್ಕೆ ಬಗ್ಗಿಸಿ, ನಡುವಿನ ಖಾಲಿ ಜಾಗಕ್ಕೆ ಬಟ್ಟೆಯನ್ನು ಮಟ್ಟಸವಾಗಿ ನಿಲ್ಲುವಂತೆ ಎಳೆದು ಅಳವಡಿಸುತ್ತಾರೆ. ಆಗ ನಾಣ್ಯಕ್ಕಿರುವಂತೆ ಎರಡು ಮುಖಗಳು ಏರ್ಪಡುತ್ತವೆ. ಈ ಬಟ್ಟೆಯ ಭಾಗದ ಎರಡು ಮುಖಗಳ ಮೇಲೂ ದೇವರ ಚಿತ್ರಗಳು ಚಿತ್ರಿಸಲ್ಪಡುತ್ತವೆ. ಹೀಗೆ ತಯಾರಾದ ಚೂರಿಪಾನನ್ನು ಎತ್ತಿ ಹಿಡಿದುಕೊಳ್ಳಲು 2 ಅಥವಾ 2.5 ಮೀಟರ್ ಉದ್ದದ ಗಳುವಿನ ಮೇಲ್ತುದಿಗೆ ಅಳವಡಿಸಲಾಗುತ್ತದೆ. ಮೇಳದಲ್ಲಿ ಕಡೆಯಪಕ್ಷ ಇಂಥ ಎರಡು ಚೂರಿಪಾನುಗಳಿರುತ್ತವೆ. 

	ಈ ಸಂಪ್ರದಾಯದಲ್ಲಿ ಬಸವನಿಗೆ ಒಂದು ಮುಖ್ಯ ಸ್ಥಾನವಿದೆ. ಬಸವನೆಂದರೆ ದೇವರ ಹೆಸರಿನಲ್ಲಿ ಬಿಟ್ಟಿರುವ ಹೋರಿ. ಹಳ್ಳಿಗಳಲ್ಲಿ ಯಾರಾದರೂ ತೊಂದರೆಗೀಡಾದಾಗ ಅಥವಾ ಮನೆಯಲ್ಲಿ ಇರುವ ಹಸುಗಳು ಗೊಡ್ಡುಬಿದ್ದಾಗ ಹೊತ್ತ ಹರಕೆಯ ಫಲವೇ ಬಸವಗಳು. ಅವನ್ನು ಯಾರೂ ಹಿಡಿದು ಕಟ್ಟುವಂತಿಲ್ಲ, ಹೊಡೆಯುವಂತಿಲ್ಲ, ಅವು ಎಲ್ಲಬೇಕಾದರೂ ಮೇಯಬಹುದು. ಅವು ಸರ್ವ ತಂತ್ರ ಸ್ವತಂತ್ರ. ಊರಾಡಲು ಹೊರಡುವಾಗ ಈ ಬಸವನನನ್ನು ಎಲ್ಲಿದ್ದರೂ ಹುಡುಕಿ ಹಿಡಿದುತಂದು ಸ್ನಾನಮಾಡಿಸಿ ಅರಿಶಿನ ಕುಂಕುಮ ವಿಭೂತಿ ಹೂಗಳಿಂದ ಅಲಂಕರಿಸಿ ಅದರ ಮೇಲೆ ನಗಾರಿಗಳನ್ನು ಹೇರಿ, ಮೇಲೊಬ್ಬ ಕೂತು ನಗಾರಿಗಳನ್ನು ಬಡಿಯುತ್ತಿರುತ್ತಾನೆ. ಈ ಬಸವನ ಹಿಂದೆ ದೀವಳಿ ದಂಡು ಚಲಿಸುತ್ತದೆ.*

	ಈ ತಂಡದವರು ದೇವರ ಪೂಜೆ ಮಾಡಿ, ಪಟಾ ಮತ್ತಿತರ ಪೂಜಾರ್ಹ ವಸ್ತುಗಳಿಗೂ ಪೂಜೆ ಸಲ್ಲಿಸಿ, ಹನ್ನೆರಡು ಅಥವಾ ಸಮಸಂಖ್ಯೆಯ ಮಂದಿ ಎರಡು ಸಾಲಾಗಿ ಎದುರುಬದುರಾಗಿ ನಿಲ್ಲುತ್ತಾರೆ. ಹೀಗೆ ನಿಂತ ಪ್ರತಿಯೊಬ್ಬರ ನಡುವೆಯೂ ಕನಿಷ್ಠ ಅರ್ಧ ಮಾರು ಅಂತರ ಇರುತ್ತದೆ. ಈ ಅಂತರದ ನಡುವೆ ಹಾವಿನ ಚಲನೆಯಾಕಾರದಲ್ಲಿ ಕೋಡಂಗಿ ಚಲಿಸುತ್ತ ನರ್ತಿಸುತ್ತಿರುತ್ತಾನೆ. ದಂಡಿನ ಜನ ಭಾಗವಂತಿಕೆ ಪದಗಳನ್ನು ಹಾಡುತ್ತಾರೆ. ಇದನ್ನೇ ಭಾಗವಂತಿಕೆ ಕಟ್ಟು ಎನ್ನುವುದು. 
	ಕೋಡಂಗಿಯ ವೇಷ ಹೀಗಿರುತ್ತದೆ : ಕಾಲಿಗೆ ಗೆಜ್ಜೆ, ಕಚ್ಚೆ, ಸೊಂಟಕ್ಕೆ ಗಂಟೆಗಳ ಸರ, ದೊಳ್ಳುಹೊಟ್ಟೆ, ಸೆಣಬಿನ ನಾರಿನಿಂದ ತಯಾರಿಸಿದ ಗಡ್ಡ ಮೀಸೆ ಮುಖಕ್ಕೆ ಅಲ್ಲಲ್ಲಿ ಕೆಂಪು ಬಿಳಿಯ ನಾಮದ ಚುಕ್ಕೆಗಳು ಹಣೆಗೆ ಮೂರು ನಾಮ ತಲೆಗೆ ನೆತ್ತಿಚೂಪಾದ ಗುಂಡನೆಯ ಟೋಪಿ, ಅದರ ತುದಿಗೆ ಒಂದು ಹೂವಿನಗೊಂಡೆ, ಟೋಪಿಗೂ ಮೂರು ನಾಮಗಳನ್ನು ಬಳಿದು ಅದಕ್ಕೆ ಬೇವಿನ ಸೊಪ್ಪನ್ನು ಸಿಕ್ಕಿಸಿರುತ್ತಾರೆ. ಎಡಗೈಯಲ್ಲಿ ಒಂದು ಊರುಗೋಲು, ಜೊತೆಗೆ ಒಂದು ಪುಟ್ಟ ಬಿಲ್ಲು, ಬಲಗೈಯಲ್ಲಿ ಸಣ್ಣಗೆ ಸುತ್ತಿದ ಜಿಂಕೆಯ ಚರ್ಮ ಅಥವಾ ಬೇವಿನ ಸೊಪ್ಪು ಅಥವಾ ಇವೆರಡೂ ಇರುತ್ತವೆ. ಉಳಿದ ಭಾಗವಂತರ ವೇಷ ಭೂಷಣಗಳಲ್ಲಿ ಇಂಥ ವಿಶೇಷವೇನೂ ಇರದೆ ಸಾಧಾರಣ ಕಚ್ಚೆ, ಸಾಧ್ಯವಾದರೆ ಕೋಟು ಮತ್ತು ಮೈಸೂರು ಪೇಟ ಇರುತ್ತದೆ. 

	ಕೋಡಂಗಿಗೆ ಈ ಮೇಳದಲ್ಲಿ ಒಂದು ಪ್ರಮುಖ ಸ್ಥಾನವಿದೆ. ವಿಷ್ಣುವಿನ ಪ್ರತಿನಿಧಿ ಕೇಶವನ ಭಂಟ ರಾಮಾನುಜಾಚಾರ್ಯರ ಪ್ರತಿರೂಪ ಇತ್ಯಾದಿ ನಂಬಿಕೆಗಳಿಂದ ಈತ ಇಲ್ಲಿ ಪೂಜಾರ್ಹ. ದಿಲ್ಲಿಯ ಬಾದಶಹ ಒಯ್ದಿದ್ದ ಚೆಲುವ ನಾರಾಯಣ ಸ್ವಾಮಿಯ ಉತ್ಸವ ಮೂರ್ತಿಯನ್ನು ರಾಮಾನುಜಾಚಾರ್ಯರು ಭಾಗವಂತಿಕೆ ಮೇಳ ಕಟ್ಟಿಕೊಂಡು ಹೋಗಿ ವಿಶಿಷ್ಟ ರೀತಿಯಲ್ಲಿ ಪಡೆದು ತಂದರೆಂದು ಐತಿಹ್ಯವಿದೆ.

	ದೀಪಾವಳಿಗೆ ಸೇರಿದಂತೆ ಭಾಗವಂತಿಕೆ ಮೇಳ ಹೊರಡುವುದು ಸಾಮಾನ್ಯ ಕ್ರಮವಾದರೂ ಸೂತಕ ಬಂದಲ್ಲಿ ಊರಾಡಲು ಹೊರಡುವುದನ್ನು ಮುಂದೂಡುತ್ತಾರೆ. ಸೂತಕ ಕಳೆದಮೇಲೆ ಶುಭದಿನ ನೋಡಿಯೇ ಊರಾಡಲು ಹೊರಡುವುದು. ಕೆಲವು ಊರುಗಳಲ್ಲಿ ಸಾವನ್ನು ಮಾತ್ರ ಸೂತಕವೆಂದು ಭಾವಿಸಲಾಗುತ್ತದೆ. ಹೆರಿಗೆ ಹಾಗೂ ಹುಡುಗಿಯರು ಮೈನೆರೆವ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಂಥ ಸಂದರ್ಭಗಳಲ್ಲಿ ಸೂತಕದ ಮನೆಯವರು ದಂಡಿನಲ್ಲಿ ಭಾಗವಹಿಸುವಂತಿಲ್ಲ, ಭಾಗವಹಿಸುವುದಾದರೆ ಮನೆಯಲ್ಲಿ ಮಲಗುವಂತಿಲ್ಲ, ಗುಡಿಯಲ್ಲಿಯೇ ಮಲಗಬೇಕು. 

	ಭಾಗವಂತಿಕೆ ಪದಗಳನ್ನು ದಂಡು ಹೊರಡುವ ಹತ್ತು ಹದಿನೈದು ದಿನ ಮೊದಲು ಗುಡಿಯಲ್ಲಿಯೋ ಚಾವಡಿಯಲ್ಲಯೋ ಸೇರಿ ಅಭ್ಯಾಸಮಾಡುವ ಪದ್ಧತಿಯಿದೆ. ಪದಗಳನ್ನು ಹಾಡುತ್ತ ಮೇಳ ನಡೆಸುವಾಗ ಬಳಸುವ ವಾದ್ಯ ವಿಶೇಷ ತಾಳವೊಂದೆ. ವಿರಳವಾಗಿ ದಮ್ಮಡಿ ಬಳಸುತ್ತಾರೆ. ದಂಡು ಪ್ರಯಾಣಿಸುವಾಗ ಮಾತ್ರ ಡೋಲು ನಗಾರಿಗಳಿರುತ್ತವೆ. 

	ಈ ಮೇಳದಲ್ಲಿ ಹಿಮ್ಮೇಳ ಮುಮ್ಮೇಳ ಎರಡೂ ಇರುತ್ತವೆ. ಒಂದು ಸಾಲಿನಲ್ಲಿರುವವರು ಮುಮ್ಮೇಳವನ್ನು ಮತ್ತೊಂದು ಸಾಲಿನಲ್ಲಿರುವವರು ಹಿಮ್ಮೇಳವನ್ನೂ ಹಾಡುತ್ತಾರೆ. ಮುಮ್ಮೇಳದವರು ಪ್ರತಿ ನುಡಿಯನ್ನು ಎತ್ತಿಕೊಡುವುದು, ಹಿಮ್ಮೇಳದವರು ಅದನ್ನು ಪುನರಾವರ್ತಿಸುವುದು ನಡೆಯುತ್ತದೆ. ಈ ಕಾರಣಕ್ಕಾಗಿ ಹಿಮ್ಮೇಳ ಮುಮ್ಮೇಳಕ್ಕಿಂತ ಸುಲಭವೆನ್ನಿಸುವುದರಿಂದ ಹಿಮ್ಮೇಳದ ಸಾಲಿನಲ್ಲಿ ಹೆಚ್ಚು ಮಂದಿ ಇರುವುದು ಕಾಣಬರುತ್ತದೆ. 

	ಈ ಮೇಳದಲ್ಲಿ ರಾಮಾಯಣ ಭಾಗವತಗಳಿಂದ ಆಯ್ದ ಪ್ರಸಂಗಗಳಲ್ಲದೆ, ಪ್ರಹ್ಲಾದಚರಿತ್ರೆ ಹಾಗೂ ತಂತಮ್ಮ ಆರಾಧ್ಯ ದೈವಗಳನ್ನು ಕುರಿತ ಪ್ರಶಂಸೆ ಗೀತೆಗಳು, ಭಕ್ತಿಗೀತೆಗಳು, ಹನುಮಗರುಡರ ಸಂವಾದ, ಮಂಡೋದರಿಯ ಕನಸು ಇತ್ಯಾದಿ ಬಿಡಿ ಪ್ರಸಂಗಗಳನ್ನೂ ಹಾಡಲಾಗುತ್ತದೆ. 

	ಊರಾಡುವಾಗ ಸಂಗ್ರಹವಾದ ಅಕ್ಕಿ ಮತ್ತು ಇತರೇ ಪಡಿಪದಾರ್ಥಗಳು ಸಾಲದೆ ಬಂದಾಗ ಊರಿನವರು ಅಷ್ಟಿಷ್ಟು ಕೊಡುವುದುಂಟು. ಅದರಿಂದ ಅಡುಗೆ ಮಾಡಿ ಇಷ್ಟದೈವಕ್ಕೆ ಎಡೆಹಾಕಿ, ಅನಂತರ ಊರವರೆಲ್ಲ ಊಟ ಮಾಡುತ್ತಾರೆ ಈ ಕಾರ್ಯಕ್ರಮಕ್ಕೆ ಪರ ಎನ್ನುತ್ತಾರೆ. ಕೆಲವು ಊರುಗಳಲ್ಲಿ ಇದನ್ನು ಎರಡುಸಲ ಆಚರಿಸುವುದುಂಟು. ದೀಪಾವಳಿಗೆ ಮೊದಲು ಆಚರಿಸುವುದನ್ನು ಕಂದಾಯ ಪರ ಎಂದೂ ದೀಪಾವಳಿಯ ಅನಂತರ ಆಚರಿಸುವುದನ್ನು ದೀವಳಿಗೆ ಪರ ಎಂದೂ ಕರೆಯುತ್ತಾರೆ. ಅಲ್ಲಲ್ಲಿ ಚೊಕ್ಕಭೋಜನ ಹಾಗೂ ಮಾಂಸದ ಪರ ಎರಡೂ ಬಳಕೆಯಲ್ಲಿವೆ. ಪರದ ಅಡುಗೆಯ ವಿಚಾರದಲ್ಲಿ ಮಡಿ ಮೈಲಿಗೆಗಳಿಗೆ ಸಂಬಂಧಿಸಿದ ಕೆಲವು ಕಟ್ಟುನಿಟ್ಟುಗಳಿವೆ. ಪರದ ದಿನವೂ ಭಾಗವಂತಿಗೆ ಮೇಳ ಆಚರಿಸಲಾಗುತ್ತದೆ; ಧೂಪದ ಸೇವೆಪತ್ತಿನ ಸೇವೆಗಳೂ ಇರುತ್ತವೆ.												
	(ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ